ನರಹರಿ ಮೋರೇಶ್ವರ -
	18ನೆಯ ಶತಮಾನದ ಒಬ್ಬ ಮರಾಠಿ ಕವಿ. ಮನೆಯಲ್ಲಿ ಈತನನ್ನು ಬಚ್ಚಾಜೀ ಎಂದು ಕರೆಯುತ್ತಿದ್ದರು. ಈತ ಹುಟ್ಟಿದ್ದು ಬೀಡ ಜಿಲ್ಲೆಯಲ್ಲಿನ ಈಟ್ ಗ್ರಾಮ. ಇವರದು ದೇಶಪಾಂಡೆ ಮನೆತನ. ತಂದೆ ಮೋರೋ ನರಹರಿ, ತಾಯಿ ಭವಾನಿ. ಅಂಬಾಭವಾನಿ ಕುಲದೇವತೆ. ಸಮರ್ಥ ಸಂಪ್ರದಾಯದ ಭೀಮಸ್ವಾಮಿ ಗುರು. ಈತ ಮುಕ್ತೇಶ್ವರ ಕವಿಯ ಅಪೂರ್ಣ ಮಹಾಭಾರತವನ್ನು ಪೂರ್ಣ ಮಾಡಲು ಪ್ರಯತ್ನಿಸಿ ಉದ್ಯೋಗ, ಭೀಷ್ಮ, ದ್ರೋಣ ಹಾಗೂ ಕರ್ಣಪರ್ವಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ದ್ರೋಣಪರ್ವ ಬಹಳ ಪ್ರಸಿದ್ಧವಾಗಿದೆ. ದ್ರೋಣಪರ್ವದಲ್ಲಿನ ಅಭಿಮನ್ಯು ಪ್ರಸಂಗ ಬಹಳ ಸುಂದರವಾಗಿದ್ದು ಮರಾಠೀ ಸಾಹಿತ್ಯದಲ್ಲಿ ವಿಶಿಷ್ಟಸ್ಥಾನ ಪಡೆದಿದೆ. ನಾಲ್ಕೂ ಪರ್ವಗಳಲ್ಲಿ ವೀರರಸವನ್ನು ಕವಿ ಬಹು ಮನೋಜ್ಞವಾಗಿ ಪ್ರತಿಪಾದಿಸಿದ್ದಾನೆ. ಈತನ ರಚನೆಯ ಮೇಲೆ ಮುಕ್ತೇಶ್ವರನ ಪ್ರಭಾವ ವಿಶೇಷವಾಗಿದೆ.					
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ